Thursday, July 9, 2009



ಕವನ- ಮಾಯಾ ಏಂಜೆಲೊ
ಅನುವಾದ : ಹನಿ

ನಾನು ತರುಣಿಯಾಗಿದ್ದಾಗ
ಪರದೆಯ ಹಿಂದೆ ನಿಂತು ನೋಡುತ್ತಿದ್ದೆ.

ಗಂಡಸರು ಬೀದಿಯ ತುದಿಯಿಂದ ತುದಿಗೆ
ಅಡ್ಡಾಡುತ್ತಿದ್ದರು. ಹುಡುಗರು, ಮುದುಕರು.
ಸಾಸಿವೆಯಂತೆ ಚುರುಕಾದ ತರುಣರು.
ನೋಡಿ ಬೇಕಾದರೆ, ಗಂಡಸರು ಯಾವಾಗಲೂ
ಎಲ್ಲಿಗೋ ಹೋಗುತ್ತಿರುತ್ತಾರೆ.
ನಾನಲ್ಲಿ ಇದ್ದೇನೆಂದು ಅವರಿಗೆ ಗೊತ್ತಿತ್ತು.
ಷೋಡಶಿ, ಪುರುಷನಿಗಾಗಿ ಹಸಿದವಳು
ನನ್ನ ಕಿಟಕಿಯ ಕೆಳಗೆ ಅವರ ನಿಟ್ಟುಸಿರು
ಯುವತಿಯ ಸ್ತನಗಳಂತೆ ಚೂಪೆದ್ದ ಅವರ ಭುಜಗಳು
ಪೃಷ್ಠಗಳ ಮೇಲೆ ಬಡಿದುಕೊಳ್ಳುವ ಮೇಲಂಗಿಯ
ತುದಿಗಳು, ಗಂಡಸರು.

ಒಂದು ದಿನ ಅವರು ಕೈ ಗರಿಗಳ ಚಾಚಿ ನಿಮ್ಮ ಹಿಡಿಯುವರು
ಈ ಜಗದ ಕೊಟ್ಟ ಕೊನೆಯ ಒಡೆಯದ ತತ್ತಿಯೋ ಎಂಬಂತೆ.
ಬಳಿಕ ಬಿಗಿಯುವರು, ಕೊಂಚ.
ಮೊದಲ ಹಿಂಡುವಿಕೆ ಹಿತ. ತಟ್ಟನೆ ಒಂದಪ್ಪುಗೆ.
ರಕ್ಷಣೆಯಿಲ್ಲದ ನಿಮ್ಮಾಳದೊಳಕ್ಕೆ ಮೆತ್ತಗೆ. ಇನ್ನಷ್ಟು.
ನೋವು ತೊಡಗುವುದು. ಭಯ ಸುತ್ತುವರಿದ ನುಲಿತ, ನಗು.
ಗಾಳಿಯೇ ಸ್ತಬ್ಧ. ಪ್ರಜ್ಞೆ ಉಕ್ಕುಕ್ಕಿ ಭಯದ ಸಿಡಿತ.
ಉರಿವ ಮೋಂಬತ್ತಿ, ಪುಡಿಪುಡಿ ಗಾಜು.
ಅವರ ಕಾಲುಗಳಲ್ಲಿ ಹರಿಯುವುದು, ಶೂಗಳ ಒದ್ದೆಯಾಗಿಸುವುದು
ನಿಮ್ಮದೇ ಜೀವರಸ.

ಲೋಕದ ಅರಿವು ಮರಳಿದಾಗ
ನಾಲಗೆಗೆ ರುಚಿ ಹಿಂದಿರುಗಲು ಯತ್ನಿಸುವಾಗ
ನಿಮ್ಮ ದೇಹ ಟಪ್ಪನೆ ಮುಚ್ಚಿಕೊಳ್ಳುವುದು. ಎಂದೆಂದಿಗೂ.
ಕೀಲಿಗಳೆ ಇಲ್ಲವಾಗುವುವು.

ನಂತರ ನಿಮ್ಮ ತಲೆತುಂಬ ಕಿಟಕಿ ತೆರೆದುಕೊಳ್ಳುವುದು.
ಅಲ್ಲಿ, ತೂಗಾಡುವ ಪರದೆಗಳ ಆಚೆ, ಗಂಡಸರು ನಡೆದಾಡುವರು.
ಏನನ್ನೋ ತಿಳಿಯುತ್ತ, ಎತ್ತಲೋ ಹೋಗುತ್ತ.
ಆದರೆ ಈಗ ನಾನು,
ಸುಮ್ಮನೆ ನಿಂತು ನೋಡುವೆ.
ಬಹುಶಃ .