Tuesday, June 2, 2009

ಕಮಲಾ ದಾಸ್ ಮತ್ತು ವಾರಿಜ ಟೀಚರ್


ವಿಷಾದಕರ ಸುದ್ದಿಯೊಂದಿಗೇ ಇದನ್ನು ಆರಂಭಿಸಬೇಕಾಗಿರಲಿಲ್ಲ. ಆದರೆ ಕಮಲಾ ದಾಸ್ ಸತ್ತಿರುವುದು ನಿಜ. ಅದು ‘ತುಂಬಲಾಗದ ನಷ್ಟ’ ಉಂಟು ಮಾಡಿರುವುದೂ ನಿಜ.

ಬಹುಶಃ ನೂರಕ್ಕೆ ೯೦ರಷ್ಟು ಪುರುಷ ಪುಂಗವರೇ ತುಂಬಿರುವ ಸಾಹಿತ್ಯ ಜಗತ್ತಿಗೆ ಕಮಲಾ ದಾಸ್ ಅಲಿಯಾಸ್ ಸುರಯ್ಯಾ ಅಲಿಯಾಸ್ ಮಾಧವಿ ಕುಟ್ಟಿ ಸತ್ತಿರುವುದು ಅಂಥ ನಷ್ಟವೇನೂ ಆಗಿರಲಿಕ್ಕಿಲ್ಲ.

ಹಾಗೇ ಹಿಂದೂಗಳಿಗೂ ಈಕೆ ತಮ್ಮವಳಾಗಿರಲಿಲ್ಲ. ಯಾಕೆಂದರೆ ಆಕೆ ಇಸ್ಲಾಮಿಗೆ ಸೇರಿದ್ದಳು. ಇಸ್ಲಾಮ್ ಎಂದೂ ಆಕೆಯನ್ನು ತಮ್ಮವಳೆಂದು ಅಂಗೀಕರಿಸಿರಲಿಲ್ಲ. ಹೀಗಾಗಿ ಈಕೆ ಆಚೆ ಈಚೆಗಳ ನಡುವೆ ನಿಂತ ಒಂಟಿ ಯಾತ್ರಿಯಂತಿದ್ದಳು. ಆದರೆ ಈ ಎಲ್ಲರಿಗೂ ಚುರುಕು ಮುಟ್ಟಿಸಿದ್ದಳು.

ಈಗ ಪುಂಖಾನುಪುಂಖವಾಗಿ ಶ್ರದ್ಧಾಂಜಲಿ ಲೇಖನ ಬರೆಯುತ್ತಿರುವವರೂ ಕೂಡ ಆಕೆಯ ಬರಹಗಳ ರೋಮಾಂಚನಕಾರಿ ವಿವರಗಳನ್ನು ನೆನೆದುಕೊಳ್ಳುತ್ತಿದ್ದಾರೆ. ಈಕೆಯ ಪೋಲಿ ಬರಹಗಳನ್ನು ಆಗಾಗ ನೆನೆಯುವುದು ಆರೋಗ್ಯಕ್ಕೆ ಒಳ್ಳೆಯದು.
ಆದರೆ ಅದೆಲ್ಲಕ್ಕೂ ಮೀರಿ, ಒಂದೇ ಒಂದು ಕಾರಣಕ್ಕೆ ಆಕೆ ನನಗೆ ಮತ್ತೆ ಮತ್ತೆ ನೆನಪಾಗುತ್ತಾಳೆ. ಅದು ವಾರಿಜಾ ಟೀಚರ್ ಅವರಿಂದಾಗಿ.
**

ತಮ್ಮ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾರೆ ಎಂಬ ಒಂದೇ ಕಾರಣಕ್ಕೆ ವಾರಿಜಾ ಟೀಚರ್ ಮೇಲೆ ಮಾಧವಯ್ಯ ಮಾಸ್ಟ್ರು ಮುನಿಸಿಕೊಂಡಿದ್ದರು. ಅವರಿಬ್ಬರ ನಡುವೆ ದೊಡ್ಡ ರಾದ್ಧಾಂತವೇ ನಡೆದುಹೋಗಿತ್ತು. ‘ನಿನ್ನ ಪೊಗರು ನನ್ನ ಮುಂದೆ ತೋರಿಸಬೇಡ’ ಎಂದು ಮಾಧವಯ್ಯ ಮಾಸ್ಟ್ರು ಬಯ್ದರು. ನಾನೇನು ನಿಮ್ಮ ತಲೆ ಮೇಲೆ ಕಾಲು ಹಾಕಿದ್ದೇನಾ ? ನನ್ನ ಕಾಲ ಮೇಲೆ ತಾನೆ ? ನೋಡ್ಲಿಕ್ಕಾಗದಿದ್ದರೆ ಆಚೆ ಕೂತುಕೊಳ್ಳಿ’ ಎಂದು ವಾರಿಜಾ ಟೀಚರ್ ಬಾಯಿ ಮಾಡಿದರು.

ಅದೇ ಮೊದಲ ಬಾರಿಗೆ ಮಾಧವಯ್ಯನವರಂಥ ಸಿಟ್ಟಾ ಸಿಡುಕ ಜನದ ಮೇಲೆ ಹರಿಹಾಯ್ದ ಹೆಂಗಸೊಂದನ್ನು ನಾವು ನೋಡಿದ್ದು. ಇದ್ದಕ್ಕಿದ್ದಂತೆ ವಾರಿಜಾ ಮೇಡಂ ನನಗೆ ತುಂಬ ಇಷ್ಟವಾಗಿಬಿಟ್ಟರು. ಅದರಲ್ಲಿ ಮಾಧವಯ್ಯನವರ ಮೇಲಿದ್ದ ಸಿಟ್ಟಿನ ಪಾತ್ರವೂ ಇತ್ತು. ಅವರು ವಿನಾಕಾರಣ ನಮ್ಮ ಮೇಲೆ ರೇಗುತ್ತಿದ್ದರು, ತದುಕುತ್ತಿದ್ದರು.

ಈ ಪ್ರಕರಣದಿಂದ ನಮಗೇನೋ ಟೀಚರ್ ಇಷ್ಟವಾದರು ನಿಜ, ಆದರೆ ಊರಿನಲ್ಲಿ ಅವರಿಗೆ ಗಯ್ಯಾಳಿ ಟೀಚರ್ ಎಂಬ ಬಿರುದು ದಕ್ಕಿತು. ಇದರ ಹಿಂದೆ ಮಾಧವಯ್ಯ ಮಾಷ್ಟ್ರು ಮತ್ತು ಇತರ ಕೆಲವರು ಇದ್ದರೆಂದು ಹೇಳಬೇಕಾಗಿಲ್ಲ.

ಆಗ ನಾನು ಒಂಬತ್ತನೆ ಕ್ಲಾಸಿನಲ್ಲಿದ್ದೆ. ನಮ್ಮ ಊರಿನಿಂದ ತಾಲೂಕು ಕೇಂದ್ರಕ್ಕೆ ೫೦ ಕಿಲೋಮೀಟರ್ ದೂರವಿತ್ತು. ನಿತ್ಯ ಹೋಗಿ ಬರುವುದು ಸಾಧ್ಯವಿಲ್ಲ ಎಂದು ವಾರಿಜಾ ಮೇಡಂ ಊರಿನಲ್ಲಿದ್ದ ತಮ್ಮ ಸಂಬಂಕ ನಿತ್ಯಾನಂದ ಮಯ್ಯರ ಮನೆಯಲ್ಲಿ ಉಳಿದುಕೊಂಡಿದ್ದರು.

ಮಯ್ಯರ ಮನೆ ನಮ್ಮ ಮನೆಗೆ ಒಂದು ಕಿಲೋಮೀಟರ್ ದೂರದಲ್ಲಿತ್ತು. ಅವರ ಮನೆಯಿಂದೊಂದು, ನಮ್ಮ ಮನೆಯಿಂದೊಂದು ಕಾಲುದಾರಿಗಳು ಬಂದು ಪೇಟೆಗೆ ಬರುವ ಮುಖ್ಯ ಹಾದಿಗೆ ಕೂಡಿಕೊಳ್ಳುತ್ತಿದ್ದವು. ನಿತ್ಯ ಬೆಳಗ್ಗೆ ಶಾಲೆಗೆ ಹೋಗುವ ಹೊತ್ತಿಗೆ ವಾರಿಜ ಟೀಚರ್ ಸಿಗತೊಡಗಿದರು. ಮೊದಮೊದಲು ಟೀಚರ್ ಕಣ್ಣಿಗೆ ಬೀಳುವುದೇಕೆ ಎಂದು ಹೊತ್ತು ತಪ್ಪಿಸಿ ಬರಲು ನೋಡಿದೆ, ಆಗಲಿಲ್ಲ. ಕಣ್ಣು ತಪ್ಪಿಸಿ ಹೋಗಲು ಯತ್ನಿಸಿದೆ, ಸಾಧ್ಯವಾಗಲಿಲ್ಲ. ಹೇಗೆ ಬಂದರೂ ಟೀಚರ್ ಅಡ್ಡ ಸಿಕ್ಕೇ ಸಿಗುತ್ತಿದ್ದರು.

ಹಾಗೆ ಅವರು ಸಿಗತೊಡಗಿದ ಕೆಲವೇ ದಿನಗಳಲ್ಲಿ ನಾನು ಮೈಚಳಿ ಬಿಟ್ಟು ಮಾತನಾಡುವಂತಾದೆ. ಅವರು ಯಾವ ಮುಜುಗರವೂ ಇಲ್ಲದೆ ತಮ್ಮ ವೈಯಕ್ತಿಕ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರು. ಮನೆಯಲ್ಲಿ ಇಬ್ಬರು ಅಣ್ಣಂದಿರ ದಬ್ಬಾಳಿಕೆ ಹಾಗೂ ತಂದೆಯ ಅಸಹಕಾರದ ನಡುವೆ ಹಟ ಕಟ್ಟಿ ಡಿಗ್ರಿ ಮಾಡಿದ್ದು, ಟೀಚರ್ ಕೆಲಸ ಸಿಕ್ಕಿದಾಗ ಮುಗಿಬಿದ್ದು ಪ್ರೀತಿ ತೋರಿಸಿದ ತಂದೆ- ಅಣ್ಣಂದಿರಿಗೆ ತಿರುಗೇಟು ನೀಡಿದ್ದು, ಡಿಗ್ರಿ ಮಾಡುವ ಸಂದರ್ಭ ಮೂರ್ನಾಲ್ಕು ಹುಡುಗರು ಗೆಳೆಯರಾದದ್ದು, ಗೆಳೆಯರೊಂದಿಗೆ ಆಡುತ್ತಿದ್ದ ಹಲವಾರು ‘ಹರೆಯದ ಆಟ’ಗಳು ಮೊದಲಾದವನ್ನೆಲ್ಲ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಿದ್ದರು.

ಅವರ ಬಳಿ ಇದ್ದ ಪುಸ್ತಕಗಳನ್ನು ಓದಲು ಕೊಡತೊಡಗಿದರು. ಅವೆಲ್ಲ ಹೆಚ್ಚಾಗಿ ನವ್ಯರ ಕತೆಗಳೋ, ಕಾದಂಬರಿಗಳೋ ಆಗಿರುತ್ತಿದ್ದವು. ಆಗ ತುಂಬಾ ಚರ್ಚೆಯಾಗುತ್ತಿದ್ದ ಅನಂತಮೂರ್ತಿಯವರ ‘ಸಂಸ್ಕಾರ’ ಕೊಟ್ಟು ಓದಿಸಿದ್ದರು. ಕುವೆಂಪುವಿನ ಎರಡು ಕಾದಂಬರಿಗಳನ್ನೂ ನನಗೆ ಕೊಟ್ಟದ್ದು ಅವರೇ.

ನಾನು ಹಳ್ಳಿ ಹುಡುಗಿ ! ಆಗ ತಾನೆ ದೊಡ್ಡವಳಾಗಿ ಲೋಕಕ್ಕೆ ಕಣ್ಣು ಬಿಡುತ್ತಿದ್ದವಳು ! ವಾರಿಜ ಮೇಡಂ ನನ್ನ ಮುಂದೆ ಹೊಸದೊಂದು ಲೋಕವನ್ನೇ ತೆರೆದಿಟ್ಟಿದ್ದರು.

ಒಮ್ಮೆ ಅವರಿದ್ದ ಮಯ್ಯರ ಮನೆಗೆ ಹೋಗಿದ್ದೆ. ಅಲ್ಲಿ ಅವರ ಕೋಣೆಯ ಬುಕ್‌ಶೆಲ್‌ನಲ್ಲಿ ಹಲವಾರು ಇಂಗ್ಲಿಷ್ ಪುಸ್ತಕಗಳೂ ಇದ್ದವು. ‘ಮೈ ಸ್ಟೋರಿ’ ಎಂದು ಬರೆದಿದ್ದ ಮುಖಪುಟದ ಪುಸ್ತಕ ಅರೆ ತೆರೆದುಕೊಂಡು ಬಿದ್ದಿತ್ತು. ಕುತೂಹಲದಿಂದ ತೆಗೆದುಕೊಂಡು ತಿರುಗಿಸಿದೆ.
“ಕಮಲಾ ದಾಸ್ ಆತ್ಮಕತೆ. ಓದ್ತೀಯ ?" ಟೀಚರ್ ಕೇಳಿದರು.
“ಯಾರವರು ?" ಎಂದು ಕೇಳಿದೆ. ನನಗೆ ಗೊತ್ತಿರಲಿಲ್ಲ.
“ಇನ್ಯಾವತ್ತಾದರೂ ಹೇಳ್ತೀನಿ ಇರು. ಈಗ ನಾನು ಓದ್ತಿದೀನಿ. ಆಮೇಲೆ ಕೊಡ್ತೀನಿ" ಎಂದರು.

ಈ ಮಾತುಕತೆ ನಡೆದ ಎರಡು ತಿಂಗಳಲ್ಲಿ ಮಯ್ಯರ ಮನೆಯಲ್ಲಿ ಘಟನೆಯೊಂದು ನಡೆಯಿತು. ಅಂದು ಮಯ್ಯರ ಹೆಂಡತಿ ಪುತ್ತೂರಿಗೆ ಹೋಗಿದ್ದರು. ಆಳುಕಾಳುಗಳ್ಯಾರೂ ಕೆಲಸಕ್ಕೆ ಬಂದಿರಲಿಲ್ಲ. ಯಾವಾಗಲೂ ಕೊನೆಯ ಪೀರಿಯಡ್ ಮುಗಿಸಿ ನನ್ನ ಜತೆಗೇ ಹೊರಡುತ್ತಿದ್ದ ಟೀಚರ್ ಅಂದು ಬೇಗನೆ ಮರಳಿದ್ದರು. ಪುತ್ತೂರಿನಿಂದ ಸಂಜೆ ಮಯ್ಯರ ಹೆಂಡತಿ ಭವಾನಿಯಮ್ಮ ಮರಳಿದಾಗ ಮನೆಯಲ್ಲಿ ಮಯ್ಯರು ಹಾಗೂ ವಾರಿಜ ಟೀಚರ್ ಮಾತ್ರವೇ ಇದ್ದರಂತೆ. ಭವಾನಿಯಮ್ಮ ಯಾಕೋ ಸಿಟ್ಟಿಗೆದ್ದು ಕೂಗಾಡಿದರಂತೆ. ಮಯ್ಯರು ಹಾಗೂ ಭವಾನಿಯಮ್ಮನ ನಡುವೆ ಜಗಳವಾಯಿತಂತೆ.

ಮರು ದಿನದಿಂದ ಅಸಹ್ಯ ಸುದ್ದಿಗಳು ಊರಿನ ತುಂಬ ಹರಡಿಕೊಂಡವು. ಸ್ವತಃ ಮಯ್ಯರು, ಭವಾನಿಯಮ್ಮ ಹಾಗೂ ಟೀಚರ್ ಯಾರ ಬಳಿಯೂ ಈ ಬಗ್ಗೆ ಏನೂ ಮಾತಾಡಲಿಲ್ಲ. ಆದರೆ, ‘ವಾರಿಜ ಟೀಚರ್ ಸೆರಗು ಸಡಿಲ’ ಎಂಬ ಅರ್ಥದ ಮಾತು ಎಲ್ಲೆಡೆ ಕೇಳಿಬಂತು. ನನಗೆ ತುಂಬ ಸಂಕಟವಾಯಿತು.

ಅದಾದ ಮೇಲೆ ಅವರು ನನಗೆ ಸಿಗುವುದೇ ಕಡಿಮೆಯಾಯಿತು. ಟೀಚರ್ ಜತೆ ಹೋಗಬೇಡ ಅಂತ ಅಮ್ಮ ಕೂಡ ಮನೆಯಲ್ಲಿ ಅಪ್ಪಣೆ ಕೊಡಿಸಿದರು.

ಇದೆಲ್ಲ ನಡೆದು ತಿಂಗಳಲ್ಲೇ ಟೀಚರ್ ತಮ್ಮ ಊರಿಗೆ ವರ್ಗ ಮಾಡಿಸಿಕೊಂಡರು. ಅಷ್ಟು ಹೊತ್ತಿಗೆ ಕಮಲಾ ದಾಸ್ ಪುಸ್ತಕದ ಬಗ್ಗೆ ನನಗೂ, ಅವರಿಗೂ ಮರೆತುಹೋಗಿತ್ತು.

ಮುಂದೆ ಎಷ್ಟೋ ವರ್ಷಗಳ ಬಳಿಕ ನಾನು ‘ಮೈ ಸ್ಟೋರಿ’ ಓದಿದೆ. ಅದರಲ್ಲಿ ನನಗೆ ಕಮಲಾ ದಾಸ್ ಸಿಕ್ಕಿದರು.

ಆದರೆ ವಾರಿಜ ಟೀಚರ್ ಮತ್ತೆ ಸಿಕ್ಕಲಿಲ್ಲ.

5 comments:

  1. ಹನಿ,

    ತುಂಬಾ ಚೆನ್ನಾಗಿ ಬರೆದಿದ್ದೀರ.. ಇಷ್ಟವಾಯಿತು. ಬರೆಯುತ್ತಿರಿ.

    - ಉಮೇಶ

    ReplyDelete
  2. ಹನಿಯವರೇ..

    ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ.... ನಿಮ್ಮ ಬರಹದ ಶೈಲಿ ತು೦ಬಾ ಇಷ್ಟವಾಯಿತು.

    ಈ ಬರಹ ತು೦ಬಾ ಚೆನ್ನಾಗಿದೆ...

    ’ಮೈ ಸ್ಟೋರಿ’ ಓದಬೇಕೆ೦ದು ತು೦ಬಾ ದಿನಗಳಿ೦ದ ಅ೦ದುಕೊಳ್ಳುತ್ತಿದ್ದೇನೆ... ಇನ್ನೂ ಪುಸ್ತಕ ಸಿಕ್ಕಿಲ್ಲ...

    ReplyDelete