Sunday, June 14, 2009
ಜೋಗಿ, ಕತೆ ಕದಿಯುವಾಗ ಹುಷಾರ್ !
ಕನ್ನಡದ ಜನಪ್ರಿಯ ಕತೆಗಾರರಲ್ಲೊಬ್ಬರಾದ ಜೋಗಿ ಉರುಫ್ ಗಿರೀಶ್ ರಾವ್ ಉರುಫ್ ಜಾನಕಿ- ಪುಂಖಾನುಪುಂಖವಾಗಿ ಕತೆಗಳನ್ನೂ ಕಾದಂಬರಿಗಳನ್ನೂ ಇತ್ತೀಚೆಗೆ ಬರೆಯುತ್ತಿರುವುದು ಸರಿಯಷ್ಟೆ. ಅವರ ‘ಚಿಟ್ಟೆ ಹೆಜ್ಜೆ ಜಾಡು’ ಮತ್ತು ‘ಯಾಮಿನಿ’ ಕಾದಂಬರಿಗಳು ಪ್ರಸಿದ್ಧವಾದುದು ಕೂಡ ನಿಮಗೆ ಗೊತ್ತಿದೆ.
ಆದರೆ ಜನಪ್ರಿಯರಾದವರು ಏನು ಬೇಕಾದರೂ ಮಾಡಬಹುದು ಅಥವಾ ಏನು ಮಾಡಿದರೂ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಭ್ರಮೆ ತಾಳಬಾರದು. ಯಾಕೆಂದರೆ ತುಸು ಎತ್ತರಕ್ಕೆ ಏರಿದವರು ಎಲ್ಲರಿಗೆ ಕಾಣುತ್ತಿರುತ್ತಾರೆ.
ಭಾನುವಾರ ‘ಅವದಿ ಬ್ಲಾಗ್’ನಲ್ಲಿ ಜೋಗಿಯವರದೊಂದು ಕತೆ ಪ್ರಕಟವಾಗಿದೆ. ಆದರೆ, ತುಸು ಇಂಗ್ಲಿಷ್ ಸಾಹಿತ್ಯದ ಪರಿಚಯ ಇದ್ದವರಿಗೂ ಗೊತ್ತಾಗುತ್ತದೆ- ಇದು ಗೈ ದ ಮೊಪಾಸಾನ ‘ದಿ ಆರ್ಟಿಸ್ಟ್’ ಕತೆಯ ನಕಲು ಎಂಬುದು. ಆದರೆ ಜೋಗಿ ಈ ಕುರಿತು ಎಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ.
ಮೊಪಾಸಾನ ಕತೆಯಲ್ಲಿ ಚೂರಿ ಎಸೆಯುವ ಕಲೆಗಾರ ಪತ್ನಿಯನ್ನು ಕೊಲ್ಲಲು ಯತ್ನಿಸಿ ವಿಫಲನಾಗುತ್ತಾನೆ. ಯಾಕೆಂದರೆ ಆತ ಕಲಿತ ಚೂರಿ ಎಸೆತದ ಕೌಶಲವೇ ಆತನನ್ನು ಹಾಗೆ ಮಾಡದಂತೆ ನಿರ್ದೇಶಿಸುತ್ತದೆ. ಜೋಗಿ ಕತೆಯಲ್ಲಿ ಕೂಡ ಅದು ಕಿಂಚಿತ್ತೂ ಬದಲಾಗದೆ ಹಾಗೇ ಬಂದಿದೆ.
ಹೌದೋ ಅಲ್ಲವೋ ಗೊತ್ತಾಗಬೇಕಾದರೆ ಈ ಲಿಂಕ್ ನೋಡಿ : http://www.worldwideschool.org/library/books/lit/drama/ASelectionFromtheWritingsofGuyDeMaupassant/chap4.html
ಹೀಗೆ ಕದಿಯುವುದರಲ್ಲಿ ಜೋಗಿ ಎತ್ತಿದ ಕೈ. ಈ ಹಿಂದೆ ಕೂಡ ಅವರು ಕಳ್ಳ ಎನಿಸಿಕೊಂಡದ್ದುಂಟು. ಅವರ ‘ರಾಯಭಾಗದ ರಹಸ್ಯ ರಾತ್ರಿ’ ಕತಾಸಂಕಲನದಲ್ಲಿ ‘ಯಡಕುಮೇರಿಯ ಸುರಂಗದಲ್ಲಿ’ ಎಂಬ ಒಂದು ಕತೆಯಿದೆ. ಇದರ ಮೂಲ ಆಂಗ್ಲ ಕತೆಗಾರ ಚಾರ್ಲ್ಸ್ ಡಿಕನ್ಸ್‌ನ ‘ದಿ ಸಿಗ್ನಲ್ ಮ್ಯಾನ್’.
ಅದು ಈ ಲಿಂಕ್‌ನಲ್ಲಿದೆ : http://books.mirror.org/dickens/signalman/index.html
“ಪ್ರಪಂಚದ ಎಲ್ಲ ಕವಿಗಳು, ಸಾಹಿತಿಗಳು ಕೈ ಇನ್ನೊಬ್ಬನ ಜೇಬಿನಲ್ಲಿರುತ್ತದೆ" ಎಂದು ಹಿರಿಯರ್‍ಯಾರೋ ಹೇಳಿರುವುದು ನಿಜವಿರಬಹುದು. ಆದರೆ ಅದು, ಮೂಲ ಎಲ್ಲಿದೆ ಎಂದು ಕೂಡ ತಿಳಿಸದೆ ಕದಿಯಬೇಕು ಎಂದು ಪರವಾನಗಿ ನೀಡಿದ್ದಾಗಿರಲಿಕ್ಕಿಲ್ಲ.
ಜೋಗಿ, ಕತೆ ಕದಿಯಿರಿ ಪರವಾಗಿಲ್ಲ- ಆದರೆ ಅದರ ಮೂಲ ಯಾವುದು ಎಂದು ತಿಳಿಸಿ. ‘ಕಳ್ಳ ಕತೆಗಾರ’ ಎನಿಸಿಕೊಳ್ಳಬೇಡಿ.
Subscribe to:
Post Comments (Atom)
:( :)
ReplyDeleteಕತೆಯ ಸುಳಿವು ಬೇಕಿದ್ದರೆ jogidiary.blogspot.com ನೋಡಿ. ಮೊಪಾಸಾ ಕತೆಗಳನ್ನು ನಾನೂ ಓದಿದ್ದೇನೆ. ನನ್ನ ಸಂಗ್ರಹದಲ್ಲಿ ಆ ಕತೆ ಇರಲಿಲ್ಲ. ಹೀಗಾಗಿ ನನಗೆ ಯಾರದ್ದೆಂದು ತಿಳಿಯಲಿಲ್ಲ. ನನ್ನ ಸಂಗ್ರಹದ ವಿಳಾಸ ಹೀಗಿದೆ-http://readbookonline.net/stories/maupassant/19/
ReplyDeleteಇಲ್ಲಿರುವ 189 ಕತೆಗಳಲ್ಲಿ ನೀವು ಹೇಳಿದ ಕತೆ ಇಲ್ಲ.
ಯಡಕುಮೇರಿಯ ಸುರಂಗದಲ್ಲಿ ಕತೆಗೂ ಸಿಗ್ನಲ್ ಮ್ಯಾನ್ ಕತೆಗೂ ಸಾಮ್ಯ ಇದೆಯೇನೋ. ನಾನು ಆ ಕತೆಯನ್ನು ಓದಿರಲಿಲ್ಲ. ನನ್ನ ಕತೆ ಅದಕ್ಕಿಂತ ಚೆನ್ನಾಗಿದೆ.
ಈ ಕತೆಗಳನ್ನು ನಾನು ಬರೆದದ್ದು ಜಾನಕಿ ಕಾಲಮ್ಮಿಗೆ. ಅಲ್ಲಿ ನಾನು ಜೋಗಿಯಾಗಿ ಸ್ವಂತ ಕತೆಗಳನ್ನು ಬರೆಯಲಿಕ್ಕೆ ಹೋಗುವುದಿಲ್ಲ. ಅದೇನಿದ್ದರೂ ಬೇರೆ ಕತೆಗಾರರನ್ನು ಪರಿಚಯಿಸುವ ಅವರ ಹಿರಿಮೆಯನ್ನು ಮೆಚ್ಚುವ ಹೀಗೊಂದು ಕತೆಯಿದೆ ಕೇಳಿ ಎಂದು ಹೇಳುವ ಅಂಕಣ. ಅವಧಿಯಲ್ಲಿ ಪ್ರಕಟವಾಗುವುದು ಆ ಅಂಕಣದ ಬರಹಗಳೇ.
ನಿಮ್ಮ ಎಚ್ಚರದ ಪ್ರತಿಕ್ರಿಯೆಗೆ ಥ್ಯಾಂಕ್ಸ್.
:)
ReplyDelete